ಆ ದಿನಗಳು
ಕಾಲೇಜಿನ ದ್ವಿವಾರ್ಷಿಕ ಪತ್ರಿಕೆಗಾಗಿ 2013ರಲ್ಲಿ ರಚಿಸಿದ್ದು
ಕಾಲೇಜಿನ ಕೊನೆಯ ದಿನ. ಕಾಲೇಜಿನ ಮುಂಭಾಗದಲ್ಲಿ ಹುಚ್ಚನಂತೆ ಗೆಳೆಯರ ಮುಂದೆ ನಿಂತಿದ್ದೆ. ಸುದೀರ್ಘ ಕೊನೆಯ ಹರಟೆಯ ನಂತರ, ಎಲ್ಲರಿಗೂ ಕೈಬೀಸಿ, ಬೇಡದ ಮನಸ್ಸಿನಿಂದ ಭಾರದ ಹೆಜ್ಜೆ ಹಾಕುತ ಬಸ್ಸೇರಿ ಕುಳಿತೆ. ಹಿಂದಿರುಗುವ ದೀರ್ಘ 8 ಗಂಟೆಗಳ ಅವಧಿಯಲ್ಲಿ ಕಳೆದ 2 ವರ್ಷದ ನೆನಪುಗಳನ್ನು ಮೆಲುಕು ಹಾಕಿದೆ. 2 ವರ್ಷದ ಹಿಂದೆ ನಡೆದ ಘಟನೆಗಳು ನನ್ನೆದುರು ಸುರುಳಿ ಬಿಚ್ಚಿದವು. ಅಂದು ರವಿವಾರ. ಕಾಲೇಜಿನ ಮೊದಲ ಔಟಿಂಗ್ನಲ್ಲಿ ದಿಕ್ಕು ಗೊತ್ತಿರದ ಊರಿನಲ್ಲಿ ಒಂದು ದಿನದ ಗೆಳೆತನವಿದ್ದ ಗೆಳೆಯನೊಂದಿಗೆ ಹೊರಟಿದ್ದೆ. ಇಬ್ಬರ ಸ್ನೇಹಕ್ಕೆ ಕಾರಣ ‘ಪಲಾಯನ’. ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳದ ಇಬ್ಬರೂ ಕಾಲೇಜಿನಿಂದ ಮನೆಗೆ ‘ಪಲಾಯನ’ದ ಕನಸಿಗೆ ಒಬ್ಬರಿಗೊಬ್ಬರು ಕಿವಿಯಾಗಿದ್ದೆವು. ಕಾಲೇಜಿನ ಮೊದಲ ವಾರ ನನಗೆ ಒಂದು ವರ್ಷದ ಅನುಭವ ನೀಡಿತ್ತು. ವಾರದ ಹಿಂದಷ್ಟೇ ಮನೆಯಲ್ಲಿ “ಹಾಸ್ಟೆಲ್ನಲ್ಲೇ ಹಾಯಾಗಿರ್ತೀನಿ, ಅಲ್ಲಿ ಮನೆಯ ಕೆಲಸ ತಾಪತ್ರಯ ಇರೋದಿಲ್ಲ” ಎಂದು ಅಪ್ಪ, ಅಮ್ಮನ ಮುಂದೆ ಗುಡುಗಿದ್ದೆ. ಈಗ ಹಾಸ್ಟೆಲ್ನಲ್ಲಿ ನಿಮಿಷ ಕಳೆಯಲೂ ಕಷ್ಟವಾಗುತ್ತಿತ್ತು. ಅಂದಿನ ನನ್ನ ದು:ಖಕ್ಕೆ ಮನೆಯ ನೆನಪೊಂದೇ ಕಾರಣವಾಗಿರಲಿಲ್ಲ. ಒಂದರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದ ನನಗೆ ಈಗಿನ ಇಂಗ್ಲೀಷ್ ಮಾಧ್ಯಮದ ವಿಷಯಗಳಲ್ಲಿ ಆಸಕ್ತಿ ಇತ್ತಾದರೂ ತರಗತಿಯಲ್ಲಿ ಹಿಂಜರಿಕೆ ಇತ್ತು. ಕಾಲೇಜಿನ ಮೊದಲ ದಿನದಂದು ತರಗತಿಯಲ್ಲಿ ಅಧ್ಯಾಪಕರೊಬ್ಬರು “ನಿಮ್ಮ ತರಗತಿಯಲ್ಲಿ ಯಾರಾದರೂ ಕನ್ನಡ ಮಾಧ್ಯಮದ ಹುಡುಗರಿದ್ದೀರಾ?” ಎಂದಾಗ, ಮುಂದಿನ ಸಾಲಿನಲ್ಲಿ ಕುಳಿತಿದ್ದ ನಾನು ಹುಮ್ಮಸ್ಸಿನಿಂದ ಕೈಯೆತ್ತಿದೆ. ತರಗತಿಯಲ್ಲಿ ನನ್ನಂತಹವರೇ ಯಾರಾದರೂ ಸಿಗಬಹುದು ಎಂದು ಹಿಂದಿರುಗಿ ಎತ್ತಿದ ಕೈಗಳಿಗೆ ಹುಡುಕಿದೆ. ಆದರೆ ಅಲ್ಲಿ ನಾನೊಬ್ಬನೇ ಕನ್ನಡ ಮಾಧ್ಯಮದ ಹುಡುಗ ಎಂದಾಗ ಗಂಟಲೊಣಗಿತು. ಅದೇ ನನ್ನ ‘ಪಲಾಯನ’ದ ಮೊದಲ ಹೆಜ್ಜೆ. ಪಂಡಿತ್ ಸರ್ ಅವರು “ನಮ್ಮ ಕಾಲೇಜಿನಲ್ಲಿ ಯಾವಾಗಲೂ ಕನ್ನಡ ಮಾಧ್ಯಮದ ಮಕ್ಕಳೇ ಹೆಚ್ಚು ಅಂಕ ಪಡೆಯುತ್ತಾರೆ” ಎಂಬ ಮಾತು ನಂತರ ಸಮಾಧಾನ ನೀಡಿತು.
ಹುಟ್ಟಿನಿಂದ ಒಂದೇ ಸ್ಥಳದಲ್ಲಿ, ಒಂದೇ ಶಾಲೆಯಲ್ಲಿ ಓದಿದ್ದ ನನಗೆ ಹೊಸ ತರಗತಿಗಳು, ಹೊಸ ಪದ್ಧತಿ ಹಾಗೂ ಹೊಸ ಸಹಪಾಠಿಗಳನ್ನು ಎದುರಿಸುವುದೇ ಕಷ್ಟವಾಗಿತ್ತು. ದಿನವೂ ಹಳೆಯ ಗೆಳೆಯರಿಗೆ ಫೋನಾಯಿಸುತ್ತಿದ್ದೆ. ಮನೆಯವರೊಂದಿಗೆ ಫೋನಿನಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ಎಲ್ಲಿ ಮಾತು ಮಾತಾಡುತ್ತ ಎಲ್ಲರ ಮುಂದೆ ಅತ್ತುಬಿಡುತ್ತೇನೋ ಎಂಬ ಆತಂಕದಿಂದ ಫೋನನ್ನು ಬೇಗನೆ ಇಟ್ಟುಬಿಡುತ್ತಿದ್ದೆ. ಇದೇ ಗುಂಗಿನಲ್ಲಿರುವಾಗ ಮೊದಲ ಔಟಿಂಗ್ನಲ್ಲಿ ನನ್ನ ಒಂದು ದಿನದ ಸ್ನೇಹಿತ ನನ್ನ ಕಣ್ಮುಂದೆಯೇ ಯಾರಿಗೂ ಹೇಳದೇ ಬಸ್ಸೇರಿ ಹೊರಟುಹೋದ. ನಾನೂ ಹೊರಡಲು ಸಿದ್ಧನಾಗಿ ಬಸ್ ಕಾಯುತ್ತಿರುವಾಗ, ಮತ್ತೊಬ್ಬ ಸ್ನೇಹಿತ ಎದುರಾದ. ಇಬ್ಬರಿಗೂ ಕೇವಲ ಮುಖ ಪರಿಚಯವಿತ್ತು. ಬಂದವನೇ “ಲೋ ಔಟಿಂಗ್ ಮುಗಿಯಲು ಇನ್ನಿರುವುದು 5 ನಿಮಿಷ ಮಾತ್ರ ಬಾರೋಲೋ” ಎಂದ ಅವನಿಗೆ ನನ್ನ ಸ್ಥಿತಿಯನ್ನು ವಿವರಿಸುವ ತಾಳ್ಮೆ ಹಾಗೂ ಆಸಕ್ತಿ ಇರದಿದ್ದ ನಾನು, “ಹೂಂ” ಎಂದು ಅವನೊಂದಿಗೆ ಓಡುತ್ತ ಕಾಲೇಜಿಗೆ ಹಿಂದಿರುಗಿದೆ.
ದಿನದಿಂದ ದಿನಕ್ಕೆ ಕಾಲೇಜು ನನಗೆ ಹೆಚ್ಚು ಹತ್ತಿರವಾಯಿತು. ತರಗತಿಯಲ್ಲಿ ಹೆಚ್ಚು ಆಸಕ್ತಿ ಬೆಳೆಯಿತು. ಸ್ಪರ್ಧಾ ಮನೋಭಾವ ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಬೇಕೆಂಬುದರಲ್ಲಿ ಆಸಕ್ತಿ ನನಗೆ ಮುಂಚಿನಿಂದಲೂ ಇರಲಿಲ್ಲ. ನನ್ನ ಹಿಂದಿನ ಫಲಿತಾಂಶವನ್ನೇ ಮುಂದುವರೆಸಬೇಕೆಂಬುದೊಂದೇ ನನ್ನ ಮುಂದಿತ್ತು. ಆದರೆ ಕೊನೆಯಲ್ಲಿ ಕಾಲೇಜಿನ ಮೊದಲಿಗರಲ್ಲಿ ನಾನೂ ಒಬ್ಬನಾಗಿದ್ದು, ಸಂತಸ ನೀಡಿತು. ಆತ್ಮೀಯ ಸ್ನೇಹಿತರಂತಿದ್ದ ಅಧ್ಯಾಪಕರಿಂದಾಗಿ ನನ್ನ ಕನ್ನಡ ಮಾಧ್ಯಮದ ಭಯ ದೂರವಾಯಿತು. 2 ತಿಂಗಳ ನಂತರ ಗೆಳೆಯರು “ಲೋ ನೀನು ನಿಜವಾಗ್ಲೂ ಕನ್ನಡ ಮೀಡಿಯಂನಿಂದ ಬಂದವ್ನಾ?” ಎಂದು ಪ್ರಶ್ನಿಸಿದಾಗ ನನ್ನ ಬಗ್ಗೆ ನನಗೇ ಹೆಮ್ಮೆಯಾಗಿ ನಕ್ಕಿದ್ದೆ. ದಿನ ಪ್ರಾರಂಭವಾಗುವುದರಿಂದ ಹಿಡಿದು, ಮಲಗುವವರೆಗೂ ಗೆಳೆಯರೊಂದಿಗೆ ಕಳೆಯುತ್ತಿದ್ದ ಸಮಯ ಲಗಾಮು ಇಲ್ಲದೇ ಕಳೆಯಿತು. ಪಠ್ಯೇತರ ಚಟುವಟಿಕೆಯಲ್ಲೂ ಭಾಗವಸಿದ್ದ ನಾನು ಕಾಲೇಜಿನ ‘ಟ್ಯಾಲೆಂಟ್ ಹಂಟ್’ನಲ್ಲಿ 4 ಬಹುಮಾನ ಪಡೆದಿದ್ದು ಸಂತಸ ನೀಡಿತು. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ತರಗತಿಯಾಗಿದ್ದ ನಮ್ಮ ‘ಡಿ’ ಸೆಕ್ಷನ್ಗೆ ‘ಬ್ಯಾಡ್ ಬಾಯ್ಸ್’ ಎಂಬ ಇಮೇಜ್ ಹಿಂದಿನಿಂದಲೂ ಬಂದ ಬಳುವಳಿ. ಕೀಟಲೆ ಅಧ್ಯಯನದಲ್ಲಿ ಕಡಿಮೆ ಆಸಕ್ತಿ ಎಂದ ತಕ್ಷಣ ಎಲ್ಲರು ನಮ್ಮ ಕಡೆ ಮುಖ ಮಾಡುತ್ತಿದ್ದರು. ಆದರೆ ನಾವು ಅದನ್ನೆಲ್ಲ ತಲೆಕೆಳಗು ಮಾಡಿದ್ದು ನಂತರದ ವಿಚಾರ. ಕಾಲೇಜ್ನ ‘ಕಲ್ಚರಲ್ ಚಾಂಪಿಯನ್’ ಆದ ನಮ್ಮ ತರಗತಿ ಅಧ್ಯಯನದಲ್ಲೂ ಮುಂದಿದ್ದು, ಕಾಲೇಜಿನ ಮೊದಲ್ 3 ಸ್ಥಾನ ಕಬಳಿಸಿದ್ದು ಎಲ್ಲರಿಗೂ ಅಚ್ಚರಿ ಹಾಗೂ ಸಂತಸ. ಇಂದಿಗೂ ಫೋನಿನಲ್ಲಿ ಕಾಲೇಜಿನಲ್ಲಿ ನಾವು ಮಾಡಿದ್ದ ಕೀಟಲೆಗಳನ್ನು ನೆನೆಯುವುದೇ ಸೊಗಸು.
ಇನ್ನು ಕಾಲೇಜಿನ ಮೆಸ್ನ ಬಗ್ಗೆ ಹೇಳುವುದಾದರೆ, ಇಂದಿಗೂ ಮೆಸ್ನಲ್ಲಿನ ಅಡುಗೆಯ ರುಚಿಯನ್ನು ಗೆಳೆಯರೊಂದಿಗೆ ಬಾಯಿ ಚಪ್ಪರಿಸುತ್ತ ನೆನೆಯುತ್ತೇನೆ. ವಿನಾ ಕಾರಣ ದ್ವಿತೀಯ ವರ್ಷದಲ್ಲಿ ನಾವು ಮಾಡಿದ್ದ ‘ಮಿನಿ ಸ್ಟ್ರೈಕ್’ ಇಂದು ನಗೆಗಡಲಲ್ಲಿ ತೇಲಿಸುತ್ತದೆ. ಉಜಿರೆಯ ಪ್ರಕೃತಿ ಸೌಂದರ್ಯವನ್ನು ನಾನು ಎಷ್ಟು ವರ್ಣಿಸಿದಿರೂ ಕಡಿಮೆಯೇ. ಯಾಕೆಂದರೆ ನಾನು ಬಯಲು ಸೀಮೆಯ ಹುಡುಗ. ಹೀಗಾಗಿ ನನಗೆ, ನನ್ನ ಕುಟುಂಬ ವರ್ಗದವರಿಗೆ ಇಲ್ಲಿನ ಸಸ್ಯ ಸಂಪತ್ತು, ಇಲ್ಲಿನ ನಿರಂತರ ಮಳೆ, ಸುಂದರ ವಾತಾವರಣ ಯಾವಾಗಲೂ ಆಕರ್ಷಣಿಯವೇ. ಇಂದಿಗೂ ಮನೆಯಲ್ಲಿ ಉಜಿರೆಯ ವಾತಾವರಣವನ್ನು ನೆನೆದು ಪುಳಕಗೊಳ್ಳುತ್ತೇವೆ.
ಒಟ್ಟಿನಲ್ಲಿ ಎಸ್ಡಿಎಂಆರ್ಸಿಯ 2 ವರ್ಷವನ್ನು ನಾನು ಸಂತಸದಿಂದ ಸವಿದೆ. ನಾನು ಬೇರೆ ಕಾಲೇಜಿನಲ್ಲಿ ಆ 2 ವರ್ಷಗಳನ್ನು ಕಳೆದಿದ್ದರೆ ಶೇ.92ರಷ್ಟು ಅಂಕಗಳನ್ನು ಪಡೆಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಬೇರೆಲ್ಲೂ ಎಸ್ಡಿಎಂಆರ್ಸಿಯಂತಹ ಸುಂದರ ದಿನಗಳನ್ನು ಸವಿಯಲು ಖಂಡಿತ ಸಿಗುತ್ತಿರಲಿಲ್ಲ ಎಂಬ ಸಂತಸ. ನನ್ನ ಕಾಲೇಜಿನ ಹೆಸರು ಹೇಳಲು ನನಗೆ ಇಂದಿಗೂ ಹೆಮ್ಮೆ ಎನಿಸುತ್ತದೆ. ಆ ದಿನಗಳು ಜೀವನ ಪೂರ್ತಿ ನೆನಪಿನಂಗಳದಲ್ಲಿರುತ್ತವೆ.