ಗುಂಡನ ಫಿಲಾಸಫಿ

ಅಪ್ಪ, ಅಮ್ಮ, ಮನೆ, ಟೈಗರ್ ಎಲ್ಲವನ್ನೂ ಬಿಟ್ಟು ದೂರಹೋಗಿ ಒಂದು ದಶಕವೇ ಕಳೆದಿತ್ತು. ಈಗ Work From Home (ಮನೆಯಲ್ಲಿಯೇ ಕೆಲಸ) ಕೃಪೆಯಿಂದಾಗಿ ಕೆಲವು ತಿಂಗಳುಗಳಿಂದ ನಮ್ಮೂರಲ್ಲೆ ನೆಲೆಸಿದ್ದೇನೆ.

ಹೀಗಿರಲು, ಇತ್ತೀಚೆಗೆ ನನ್ನ ಅಕ್ಕ ಮತ್ತು ಒಂದೂವರೆ ವರ್ಷದ ನನ್ನ ಆಳಿಯ ಗುಂಡ ಊರಿಗೆ ಬಂದರು. ಬಂದ ದಿನವೆಲ್ಲಾ ಸದಾ ತನ್ನ ಅಮ್ಮನ ಬಾಲದಂತೆ ಅವಳ ಹಿಂದೆಯೇ ಓಡುತ್ತಿದ್ದ ಗುಂಡ, ಆಗೊಮ್ಮೆ ಈಗೊಮ್ಮೆ ಹಿಂದಿನಿಂದಲೇ ತನ್ನ ತುಂಬಿದ ಗಲ್ಲದ, ಹುಬ್ಬು ಗಂಟಿಕ್ಕಿದ ಮೊಗವನ್ನು ಹೊರಹಾಕಿ “ಯಾರು ನೀನು ?” ಎಂಬ ನೋಟ ಬೀರುತ್ತಿದ್ದ. ಗುಂಡನ ಈ ಮುಗ್ಧ ಮೋರೆ ನೋಡಿ ನಮ್ಮಂತೆ ನೀವು ಮೋಸ ಹೊಗದಿರಿ! ಯಾಕೆಂದರೆ, ಬಂದ ಎರಡೇ ದಿನಕ್ಕೆ ತನ್ನ ತುಂಟಾಟ ಹಾಗೂ ತೊದಲು ನುಡಿಯ ಮಂತ್ರ ಪ್ರಯೋಗಸಿ ಮನೆಯವರನೆಲ್ಲ ವಶೀಕರಿಸಿದ್ದಾನೆ! ಇವನು ನಿಂತರೂ, ಕುಂತರೂ, ಮಲಗಿದರೂ ನಮಗೆಲ್ಲ ಇವನದೇ ಧ್ಯಾನ. ಸಂಜೆ ನನ್ನ ಕೆಲಸದ ನಂತರ ಇವನನ್ನು ನಗಿಸಲು ಯತ್ನಿಸುವುದೇ ನನ್ನ ದಿನಚರಿಯ ಒಂದು ಭಾಗವಾಗಿಬಿಟ್ಟಿದೆ. ಬಾ ಬಾ ದಾ ದಾ ಎಂಬ ಇವನ ತೊದಲು ರಾಗಕ್ಕೆ ಮನೆಯವರೆಲ್ಲರ ತಾಳವೂ ಸೇರಿ ಓಣಿಯಲ್ಲಾ ನಮ್ಮ ಮನೆಯದೇ ಸದ್ದು. ತೇಲಾಡುತ, ಪಟಪಟ ಓಡಾಡುತ, ತನ್ನ ಪುಟ್ಟ ಹೆಜ್ಜೆಗಳಿಂದ ಮನೆ-ಮನವನ್ನೆಲ್ಲಾ ತುಂಬಿದ್ದಾನೆ.

ಗುಂಡನ ಈ ಗೂಂಡಾಗಿರಿಗೆ ಆಕರ್ಷಿತನಾಗಿ “ಗುಂಡನ ಫಿಲಾಸಫಿ” ಯನ್ನು ಅರ್ಥಮಾಡಿಕೊಳ್ಳುವ ವಿಚಿತ್ರ ಕಾರ್ಯಕ್ಕೆ ಕೈ ಹಾಕಿದೆ. ಗುಂಡನ ಸ್ವಭಾವನನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ “ನೇರ ಮತ್ತು ಸರಳ”. ಸಿಟ್ಟು, ನಗು, ಅಳು ಹೀಗೆ ಎಲ್ಲವೂ ಕಾಮನಬಿಲ್ಲಿನಂತೆ ಗೊಚರಿಸಿದ ಮರುಕ್ಷಣವೇ ಕುರುಹೇ ಇಲ್ಲದಂತೆ ಮಾಯ. ನಮ್ಮಂತೆ ಮುಕ್ತ ಮನಸ್ಸಿನಿಂದ ನಗಲು ಅಥವಾ ಅಳಲು ಅವನಿಗೆ ಯಾವುದೇ ಹಿಂಜರಿಕೆ, ಮುಜುಗರ, ನಾಚಿಕೆ ಇಲ್ಲ. ಅಳು ಬಂದಾಗ ಆಕಾಶವೇ ಬೀಳುವಂತೆ ಅರಚುತ್ತಾನೆ, ಖುಷಿಯಾದಾಗ ಕೆಕ್ಕರಿಸಿ ನಗುತ ನಗುವಿನ ಮಳೆಯನ್ನೇ ಸುರಿಸುತ್ತಾನೆ, ಸಿಟ್ಟಾದರಂತೂ ಇವನ ಮೈಯಲ್ಲಾ ಗುಡುಗು-ಸಿಡಿಲು! ಹೀಗೆ ತನಗನ್ನಿಸಿದ್ದನ್ನು ಹೇಳಲು ಅವನಿಗೆ ಮಾತು-ಭಾಷೆಯ ಅವಶ್ಯಕತೆಯೇ ಇಲ್ಲ. ಇನ್ನು ನಾವು ಮಾತು-ಭಾಷೆ ಬಂದರೂ ಕೆಲವೊಮ್ಮೆ ಮೂಕರಾಗಿ ಬಿಡುತ್ತೇವೆ.

ಒಮ್ಮೊಮ್ಮೆ ನಾನು ನನ್ನ ಕೆಲಸದ ನಿಮಿತ್ತ ನನ್ನ ಕೋಣೆಯಲ್ಲಿ ಬಂದಿಯಾಗಿರುವಾಗ, ಸದ್ದಿಲ್ಲದೇ ಮಿಂಚಿನಂತೆ ನನ್ನ ಕೊಣೆಗೆ ನುಗ್ಗುವ ಗುಂಡ, ತುಸು ನಕ್ಕು ಮಿಂಚಿನಂತೆ ಮಾಯವಾಗುತ್ತಾನೆ. ಗುಂಡನ ಈ ಚೇಷ್ಟೆಯ ನಂತರ ನಾನು ಕೆಲಸಕ್ಕೆ ಹಿಂತಿರುಗಿದರೂ, ಗುಂಡನ ನಗುವಿನ ನೆರಳು ನನ್ನ ಮುಖದಲ್ಲಿ ಹಾಗೇ ಉಳಿದು ಬಿಡುತ್ತದೆ. ನನ್ನನು ಕೆಲಸದೊತ್ತಡದಿಂದ ಬಿಡುಗಡೆ ಮಾಡುವ ಕಾರ್ಯಕ್ಕೆ ಇವನು ತನ್ನನ್ನು ತಾನೇ ನೆಮಿಸಿಕೊಡಿದ್ದಾನೆ.

“ಬೀಳ್ತಿಯೋ ಗುಂಡಾ! ಮೆಲ್ಲಕ ಓಡಾಡು!” ಎಂಬ ನಮ್ಮೆಲ್ಲರ ಕೂಗನ್ನು ಲೆಕ್ಕಿಸದೇ, ಮನೆಯ ಸಂದಿ-ಗೊಂದಿಗಳಲ್ಲೆಲ್ಲ ದಡಬಡನೆ ನುಗ್ಗುತ, ಕಿಟಕಿ-ಕುರ್ಚಿಗಳನ್ನೆಲ್ಲಾ ಸರಸರನೆ ಏರುತ, ಮೆಟ್ಟಿಲು-ಮಂಚಗಳೆಲ್ಲದರಿಂದ ಧೊಪ್ ಎಂದು ಎಗರುತ್ತ, ಆಗೊಮ್ಮೆ-ಈಗೊಮ್ಮೆ ಬಿದ್ದರೂ ಲೆಕ್ಕಿಸದೇ, ಕ್ಷಣಾರ್ಧದಲ್ಲಿಯೇ ತಂತಾನೆ ಎದ್ದು ಓಡಾಡುವ ಭಂಡ ಈ ನಮ್ಮ ಗುಂಡ. ಇವನ ಈ ಉತ್ಸಾಹ, ಕೌತುಕ ಹಾಗೂ ಎಷ್ಟೇ ಬಿದ್ದರೂ ಕುಗ್ಗದೇ ಮೇಲೇಳುವ ಭಂಡತನ ಎಲ್ಲವನ್ನೂ ಒಮ್ಮೆ ಎರವಲು ಪಡೆಯಬೇಕೆಂಬುದೇ ನನ್ನ ಹೊಸ ಆಸೆ. ಗುಂಡನು ನೆನ್ನೆಯ ನೆನಪಿನ ಬಲೆಯಲ್ಲಿ ಸಿಲುಕಿಕೊಳ್ಳದಿಲ್ಲ, ನಾಳಿನ ನಿರಿಕ್ಷೆಯ ಚಿಂತೆಯಲ್ಲಿ ಮುಳುಗುವುದಿಲ್ಲ. ಈ ಕ್ಷಣ ಕರಗುವುದರೊಳೆಗೇ ಅದನ್ನು ಸವಿಯುವುದು ಹೇಗೆ ಎಂಬುದನ್ನು ಗುಂಡನಿಂದಲೇ ಕಲಿಯಬೇಕು.

ಅಂದೊಮ್ಮೆ ಕೆಲಸದ ನಂತರ ಒಂದು ಸಿನಿಮಾ ನೊಡಲು ನಿರ್ಧರಿಸಿ, ಸಾವಿರಾರು ಬೆಲೆಯ ಸ್ಮಾರ್ಟ ಟಿವಿಯಲ್ಲಿ ಸಿನಿಮಾ ಒಂದನ್ನು ಹುಡುಕುತ ಕುಳಿತೆ. ಒಂದು ಗಂಟೆ ಕಳೆದರೂ ವಿಶ್ವದ ಸಾವಿರ-ಸಾವಿರ ಸಿನಿಮಾಗಳಲ್ಲಿ ಒಂದನ್ನೂ ಆಯ್ಕೆ ಮಾಡಲಾಗದೇ ನಿಟ್ಟುಸಿರು ಬಿಟ್ಟು ಟಿವಿ ಆಫ್ ಮಾಡಿದೆ. ಹೀಗೆ ಬೇಸರದಿ ಪೆಚ್ಚುಮೊರೆ ಹೊತ್ತು ಕುಳಿತಿರುವಾಗ ಪಕ್ಕದಲ್ಲೇ ಆದ ಸದ್ದೊಂದು ನನ್ನ ಗಮನ ಸೆಳೆಯಿತು. ಸದ್ದಾದ ಕಡೆ ನನ್ನ ಕಣ್ಣು ಹಾಯಿಸಿದರೆ, ಅಲ್ಲಿ ಗುಂಡ ಕಸ ಪೊರಕೆಯ ಕಡ್ಡಿ, ಎಲ್ಲಿಂದಲೋ ತಂದ ಒಂದು ಬೊಟಲ್ ಕ್ಯಾಪ್, ಮತ್ತೊಂದಿಷ್ಟು ಯಾವುದೋ ತರದ ಕಸವನ್ನೆಲ್ಲಾ ಒಂದು ತಟ್ಟೆಯಲ್ಲಿ ಹರಡಿಕೊಂಡು ತನ್ನಷ್ಟಕ್ಕೆ ತಾನೇ ಮಾತಾಡುತ್ತಾ ಆಡಿಕೊಂಡು ನಲಿಯುತ್ತಿದ್ದ. ನನ್ನ ಎಲ್ಲಾ ದುಬಾರಿ ಮನರಂಜನಾ ಸೌಕರ್ಯಗಳು ಇವನ ಕಸ-ಪೊರಕೆಯ ಕಡ್ಡಿಯ ಮುಂದೆ ಬಿದ್ದು ಹೊದವು. ಆಗಲೇ ಅನ್ನಿಸಿತು ಗುಂಡನೆಂದೂ “ಬೇಸರ” ಎಂದಿದ್ದೇ ಇಲ್ಲಾ. ಅದು ಕೊಣೆಯ ಮೂಲೆಯಲ್ಲಿರುವ ಚಿಕ್ಕ ಇರುವೆಯಾಗಿರಲಿ ಅಥವಾ ಪ್ಲ್ಯಾಸ್ಟಿಕ್ ಚೀಲವಿರಲಿ ಅಥವಾ ಚಪ್ಪಲಿಯೇ ಇರಲಿ, ಇದ್ದಿದ್ದರಲ್ಲೆ ತನ್ನಷ್ಟಕ್ಕೆ ತಾನು ಆಡಿ ನಲಿಯುತ್ತಾನೆ! ಗುಂಡನನ್ನು ಎಲ್ಲಿ ಬಿಟ್ಟರೂ ಒಂದಾದರೊಂದು ಆಟವನ್ನು ಹೇಗಾದರೂ ಹುಡುಕುತ್ತಾನೆ. ಜಗತ್ತಿನ ಯಾವುದೇ ವಸ್ತು ಗುಂಡನ ಕೈಯಲ್ಲಿ ಸಿಕ್ಕರೆ ಅದು ಆಟದ ಸಾಮಾನಾಗಬಹುದು. ಏಕೆಂದರೆ ಅವನ ಖುಷಿಗೆ ಬಾಹ್ಯ ವಸ್ತು ಕೇವಲ ಸಾಮಗ್ರಿ ಮಾತ್ರ.

ಹೀಗೆ ಗುಂಡನ ಫಿಲಾಸಫಿಯ ಪರಾಮರ್ಶೆಯಿಂದ ಶುರುವಾಗಿ ವಿವಿಧ ಯೊಚನಾ ಸುಳಿಯಲ್ಲಿ ಸಿಲುಕಿ, ಜೀವನ ಎಂದರೇನು? ಜೀವನದ ಗುರಿಯೇನು? Individualism, Existentialism, Nihilism ಹೀಗೆ ಹಲವಾರು “ism” ಗಳ ತರ್ಕ-ವಿತರ್ಕಗಳ ಸಾಗರದಲ್ಲಿ ಮುಳುಗಿ-ಎದ್ದು ದಿಕ್ಕುತಪ್ಪಿ ತಬ್ಬಿಬ್ಬಾಗಿ ಕುಳಿತಿದ್ದಾಗ, ಇವಾವುದರ ಅರಿವೇ ಇಲ್ಲದೇ ತನ್ನ ಪಾಡಿಗೆ ತಾನು ಆಡುತ್ತಿದ್ದ ಗುಂಡ ಒಮ್ಮೆಲೇ ನೇರವಾಗಿ ನನ್ನೆಡೆ ನೋಡಿ ಮಂದಹಾಸ ಬೀರಿ ತನ್ನೊಡನೆ ಆಡಲು ಬರುವಂತೆ ಸನ್ನೆ ಮಾಡಿದ. ಗುಂಡನ ನಗುವಿನ ವಿಶಾಲ ಕೈಯೊಂದು ಆ ಚಿಂತನಾ ಸಾಗರದಲ್ಲಿ ಮುಳುಗಿದ್ದ ನನ್ನನ್ನು ಹೊರಕ್ಕೆಳೆದಂತೆ ಭಾಸವಾಯಿತು. ಗುಂಡನ ಈ ಹೊಸ ವಿರಾಟ್ ಸ್ವರೂಪವನ್ನು ನೋಡಿ ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಗುಂಡನ ಪೊರಕೆಯ ಕಡ್ಡಿಯಲ್ಲಿಯೇ ಇದೆ ಅನ್ನಿಸಿತು. ಹಾಗೇ ನನ್ನಷ್ಟಕ್ಕೇ ನಾನೇ ನಗುತ್ತಲೇ ನನ್ನ Existential Crisis ಅನ್ನು ಮೂಲೆಗೊತ್ತಿ ಗುಂಡನ ಕಸದೊಡನೆ ಆಡಲು ಹೋದೆ.