ಕರ್ಣಾಟ ಭಾರತ ಕಥಾಮಂಜರಿಯ ಮನನ: ಕರ್ಣನ ಜನನ ಮತ್ತು ಬಾಲ್ಯ

ನನ್ನ ಬಹುದಿನದ ಆಸೆಯಾದ ಕುಮಾರವ್ಯಾಸ ಭಾರತದ ಓದನ್ನು ಕೊನೆಗೂ ನನ್ನೂರಲ್ಲಿ ಆರಂಭಿಸಿದ್ದೇನೆ. ಓದಿದ್ದನ್ನು ಬರೆದರೆ ಹೆಚ್ಚು ಅಂತರ್ಗತವಾಗಬಹುದೆಂಬ ಆಶಯ, ಕಾವ್ಯದ ಸ್ವಾರಸ್ಯವನ್ನು ಹಂಚಿಕೊಳ್ಳುವ ಆಸೆ ಮತ್ತು ಕನ್ನಡದಲ್ಲಿ ಬ್ಲಾಗಿಸುವ ಬಯಕೆ ಹೀಗೆ ಎಲ್ಲವೂ ಸೇರಿ ಈ ಸರಣಿಯನ್ನು ಆರಂಭಿಸಲು ನನ್ನನು ಮುಂದೂಡಿವೆ. ಅರ್ಥೈಸುವ ಅಥವಾ ವಿಶ್ಲೇಷಿಸುವ ಸಾಹಸಕ್ಕೆ ಕೈಹಾಕದೆ, ನನಗೆ ಹಿಡಿಸಿದ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಳ್ಳುವುದಷ್ಟೇ ಇದರ ಉದ್ದೇಶ.

೧.

ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ

ತಾವರೆ ಮಿತ್ರ: ಕಮಲದ ವೈರಿ ಚಂದ್ರ. ಚಂದ್ರನ ವೈರಿಯು ಸೂರ್ಯ. ತಾವರೆಯ ಮಿತ್ರ ಸೂರ್ಯ.
“ಕರಗಿ ಕರುವಿನೊಳ್”, “ಥಳಥಳಿಸಿ ತೊಳಗುವ ತನುಚ್ಛವಿಯ” ಎಂಬ ಪದಪುಚ್ಛಗಳು

‘ಚರಣ ಕರಪಲ್ಲವದ ಕೆಂಪಿನ’ ಸಾಲು ತುಂಬ ಅರ್ಥಪೂರ್ಣವಾಗಿದೆ. ಮಗುವಿನ ಕೈಕಾಲುಗಳು ಗಿಡ-ಮರದ ಚಿಗುರಿನಂತೆ ಕೆಂಪು ಬಣ್ಣದ್ದಾಗಿದೆ ಎಂಬ ಒಂದು ಸುಂದರ ವರ್ಣನೆ ಒಂದೆಡೆಯಾದರೆ. ಹುಟ್ಟಿರುವ ರವಿತನಯನ ಅಂಗಾಂಗದ ಕೆಂಪು ಬಣ್ಣದಂತೆ ಮುಂಜಾನೆ “ಹುಟ್ಟುವ” ರವಿಯ ಬಣ್ಣವೂ ಕೆಂಪೇ ಆಗಿದೆ, ಇದು ತಂದೆ-ಮಗನ ಸಾಮ್ಯತೆಯನ್ನೂ ಸೂಚಿಸುವ ಇನ್ನೊಂದು ಅರ್ಥ ಹೊಂದಿರಬಹುದೇ? ಹಾಗೂ ಮಗು ಮತ್ತು ಚಿಗುರು ಈ ಎರಡೂ ಹುಟ್ಟನ್ನೇ ಸೂಚಿಸುವುದನ್ನೂ ಇಲ್ಲಿ ಕಾಣಬಹುದು.

೨.

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ

ಕೆದರು, ಒದೆ, ಒದರು ಎಂಬ ಆಡು ಮಾತಿನ ಪದಗಳ ಬಳಕೆ.
ಇದು+ಎಂತಣ: “ಇದು ಎಂತಹ” (“ಇದು ಎಂತಾ ಲೋಕವಯ್ಯಾ…” ಎಂಬ ಹಾಡಿನ ಅರ್ಥದಲ್ಲಿ) ಎಂಬ ಪದ ಬಳಕೆಯ ಹಳೆಯರೂಪ.

ಮಗುವು ಶಿಶುಗಳರಸನೋ ಎನ್ನುವಷ್ಟು ಸುಂದರವಾಗಿದೆ! ಮಗು ಪಾಲಕರ ಗಮನ ಸೆಳೆಯಲು ಅಳುವುದು, ಹೊರಳಾಡುವುದು ಸಾಮಾನ್ಯ. ಇಲ್ಲಿ ಅದರ ವಿವರಣೆ ಸುಂದರವಾಗಿ ಚಿತ್ರಿತವಾಗಿದೆ. ಮಗುವು ತನ್ನ ತಂದೆಯಾದ ಸೂರ್ಯನ್ನು ಸೆಳೆಯಲೇ ಹೀಗೆ ಅಳುತ್ತಿದೆ ಎಂದು ಅರ್ಥೈಸಬಹುದು.

೩.

ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ

ಆವಳೋ: ಸಾಮಾನ್ಯವಾಗಿ ಆಡುಮಾತಿನಲ್ಲಿ ಈ ಪದವನ್ನು (“ಯಾವಳೋ”) negative ಅರ್ಥ ಬರುವಂತೆ ಪ್ರಯೋಗಿಸಲಾಗುತ್ತದೆ. ಇಲ್ಲಿ ಸೂತನು ಸಿಡಿಮಿಡಿಗೊಂಡು ಹೀಗೆ ಹೇಳಿದಂತಿರುವುದು ಎಂದು ಅರ್ಥೈಸಬಹುದು.

೪.

ತೃಣವಲಾ ತ್ರೈಲೋಕ್ಯರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪಲುಳಿತೇ
ಕ್ಷಣನು ಬಂದನುಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ

ಕ್ಷಣದೊಳ್+ಒದಗುವ ಬಾಷ್ಪ+ಲುಳಿತ+ಈಕ್ಷಣನು. ಬಾಷ್ಪ: ಕಣ್ಣೀರು; ಲುಳಿತ: ಚಂಚಲ; ಈಕ್ಷಣ: ನೋಟ, ಕಣ್ಣು

ಭಾಷೆಯ ಹಿಡಿತವಿದ್ದರೆ ಕವಿಯು ಒಂದು ಸನ್ನಿವೇಶವನ್ನು ಎಷ್ಟು ಸುಂದರವಾಗಿ ಹಾಗೂ ಸೂಕ್ಷ್ಮವಾಗಿ ಚಿತ್ರಿಸಬಹುದು ಎಂಬುದಕ್ಕೆ “ಕ್ಷಣದೊಳೊದಗುವ ಬಾಷ್ಪಲುಳಿತೇ ಕ್ಷಣನು” ಎಂಬ ಸಾಲೇ ಸಾಕ್ಷಿ.

೫.

ಹೊಳೆ ಹೊಳೆದು ಹೊಡೆಮರಳಿ ನಡು ಹೊ
ಸ್ತಿಲಲಿ ಮಂಡಿಸಿ ಬೀದಿ ಬೀದಿಗ
ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ
ಲಲಿತರತ್ನದ ಬಾಲದೊಡಿಗೆಯ
ಕಳಚಿ ಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ

ಹೊಳೆ-ಹೊಳೆ, ಬೀದಿ-ಬೀದಿ, ಕರೆ-ಕರೆ, ಜನ-ಜನ ಎಂಬ ಹಲವು ಜೋಡಿಪದಗಳ ಬಳಕೆ